ಅವಳಿಗಳು, ಅವಳಿತನ
	
ಮಾನವ ಸಂತಾನವರ್ಧನೆಯಲ್ಲಿ ಒಂದು ಹೆರಿಗೆಗೆ ಒಂದು ಮಗು ಸಹಜವಾದದ್ದು. ಕೆಲವು ಬಾರಿ ಒಂದೇ ಗರ್ಭದಲ್ಲಿ ಎರಡು ಮೂರು ಕೆಲವೂಮ್ಮೆ ನಾಲ್ಕು ಕೂಸುಗಳು ಬೆಳೆಯುವುದು ಉಂಟು (ಆರು ಮಕ್ಕಳು ಒಂದೇ ಹೆರಿಗೆಯಲ್ಲಿ ಜನಿಸಿದ್ದು ಕೂಡ ದಾಖಲಾಗಿದೆ)
	
ಎರಡು ಮಕ್ಕಳು ಒಂದೇ ಗರ್ಭದಲ್ಲಿ ಬೆಳೆಯುವುದನ್ನು "ಅವಳಿ" ಎಂದು ಕರೆಯುತ್ತಾರೆ. ಅದರಲ್ಲಿ ಎರಡು ವಿಧ. ಸಾಧಾರಣವಾಗಿ ಹೆಣ್ಣಿನಲ್ಲಿ ಒಂದು ಮಾಸಿಕ ಚಕ್ರದಲ್ಲಿ ಒಂದು ಅಂಡಾಣು ಫಲಿತವಾಗಿ ಯುಗ್ಮಜವಾಗುತ್ತದೆ. ಕೆಲವೊಮ್ಮೆ ಈ ಒಂದೇ ಯುಗ್ಮಜ ಒಂದು ಮಗುವಾಗಿ ಬೆಳೆಯುವ ಬದಲು ಎರಡಾಗಿ ಕವಲೊಡೆದು ಅವಳಿ ಮಕ್ಕಳಾಗುತ್ತವೆ. ಇವುಗಳನ್ನು ಒಂದೇ ಅಂಡಾಣುವಿನ ಅವಳಿ (ಮಾನೋಝೈಗೊಟಿಕ್) ಸಮರೂಪಿ ಎಂದು ಹೆಸರಿದೆ. ಇವು ಒಂದೇ ರೂಪದ, ಒಂದೇ ಲಿಂಗ ಅವಳಿಗಳಾಗುತ್ತವೆ. ರೂಪ, ಆಕಾರ, ಬಣ್ಣ, ಆಂತರಿಕ ಶಕ್ತಿ, ಮನೋಭಾವ ಎಲ್ಲದರಲ್ಲಿಯೂ ಒಂದನ್ನೊಂದು ಹೋಲುತ್ತವೆ. ಮಾಸುವಿನಲ್ಲಿರುವ ರಕ್ತನಾಳಗಳು ಎರಡೂ ಶಿಶುಗಳಿಗೂ ರಕ್ತಪೂರೈಕೆ ಮಾಡುತ್ತವೆ. ತೀರ ಪ್ರಾರಂಭಿಕ ಹಂತದಲ್ಲಿ ಯುಗ್ಮಜವು ಎರಡಾದರೆ, ಪರಿಪೂರ್ಣ ಅವಳಿ ಜವಳಿಗಳು ಬೆಳೆಯುತ್ತವೆ. ಆದರೆ ಬೆಳವಣಿಗೆಯು ವಿವಿಧ ಹಂತ ಪೂರೈಸಿದ ಭ್ರೂಣ ಎರಡಾಗಿ ಸೀಳಿದರೆ ಸಯಾಮಿ ಅವಳಿಗಳು ಆಗುವುವು. ಇವು ತಲೆ, ಎದೆ, ಬೆನ್ನು ಅಥವಾ ಸೊಂಟದ ಬಳಿ ಒಂದನ್ನೊಂದು ಅಂಟಿಕೊಂಡಿರುತ್ತವೆ. ಒಂದು ದೇಹ, ಎರಡು ತಲೆ ಇರುವ ಸಾಧ್ಯತೆಗಳು ಇದೆ. ಕೆಲವೊಮ್ಮೆ ಒಂದು ಅವಳಿಯ ಹೊಟ್ಟೆಯೊಳಗೆ ಇನ್ನೊಂದು ಮಗು ಸೇರಿಹೋಗಿರುವ ಸಾಧ್ಯತೆಯೂ ಇದೆ. ಒಂದು ಮಗು ಬಹಳ ಚೆನ್ನಾಗಿ ಬೆಳೆದು ಮತ್ತೊಂದು ಮಗು ತೆಳುವಾಗಿ ಬೆಳೆಯುವುದೂ ಉಂಟು. ರಕ್ತ ಸಂಚಾರ ಬಹಳಷ್ಟು ವ್ಯತ್ಯಯವಾದರೆ ಒಂದು ಮಗು ತೀರ ಪೇಪರಿನಂತಾಗಿ ಬರಿಯ 'ಪಳೆಯುಳಿಕೆ ಮಾತ್ರವಾಗಿರಬಹುದು. ಈ ರೀತಿಯ ಅವಳಿಗಳು ಮಾನವರಲ್ಲಿ ಹೆಚ್ಚು. ಮತ್ತೊಂದು ರೀತಿಯ ಅವಳಿಗಳು ಅಸಮ ರೂಪಿಗಳು. ಎರಡು ಪ್ರತ್ಯೇಕ ಅಂಡಾಣುಗಳು ಒಂದೇ ಮಾಸಿಕ ಚಕ್ರದಲ್ಲಿ ಫಲಿಸುತ್ತವೆ, ಎರಡು ಭ್ರೂಣಗಳು ಗರ್ಭದಲ್ಲಿ ಬೇರೆ ಬೇರೆ ಜಾಗದಲ್ಲಿ ನಾಟಿಯಾಗುತ್ತವೆ. ಮಾಸು, ಗರ್ಭ ಚೀಲ ಎಲ್ಲವೂ ಪ್ರತಿ ಭ್ರೂಣಕ್ಕೂ ಪ್ರತ್ಯೇಕವಾಗಿರುತ್ತವೆ. ಈ ರೀತಿಯ ಅವಳಿಗಳನ್ನು (ಡೈಝೈಗೊಟಿಕ್). ಈರಮ್ಡಾಣುವಿನದು ಎನ್ನುತ್ತಾರೆ. ಅವಳಿಗಳು ಒಂದನ್ನೊಂದು ಹೋಲುವುದಿಲ್ಲ. ಒಂದು ಹೆಣ್ಣು ಮಗು ಒಂದು ಗಂಡು ಮಗು ಆಗುವುದೂ ಉಂಟು. ಇಲ್ಲಿ ಸಯಾಮಿ ಅವಳಿಗಳಾಗುವ ಸಾಧ್ಯತೆ ಇಲ್ಲ. ಎರಡು ಮಕ್ಕಳು ತೂಕದಲ್ಲಿಯೂ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಮಾಸುವಿನಿಂದ ಪ್ರತ್ಯೇಕವಾಗಿಯೇ ರಕ್ತ ಪೂರೈಕೆ ಇರುತ್ತದೆ.
	
ಅವಳಿಗಳು ಹುಟ್ಟುವುದು ಅಪರೂಪವಲ್ಲ. ಮದ್ರಾಸಿನ ಎಗ್ಮೋರ್ ಹೆರಿಗೆ ಆಸ್ಪತ್ರೆಯಲ್ಲಿ 25904 ಹೆರಿಗೆಗಳಲ್ಲಿ ಹದಿಮೂರು ಅವಳಿಗಳು ಹುಟ್ಟಿದವು. ಅಂದರೆ 62 ಹೆರಿಗೆಗಳಲ್ಲಿ ಒಂದು. 5 ತ್ರಿವಳಿಗಳು ಹುಟ್ಟಿದವು. 192ಂ ರಿಂದ 1975 ವರೆಗೆ 54000 ಹೆರಿಗೆಗಳಿಗೆ ಒಂದೇ ನಾಲ್ಕವಳಿ ಮಕ್ಕಳು ಹುಟ್ಟಿದವು. ಅವಳಿಗಳಾಗುವ ಸಂಭವ ಒಂದೊಂದು ನಾಡು ಜನಾಂಗಗಳಲ್ಲಿಯೂ ಒಂದೊಂದು ಬಗೆ. ಬಡಗಣ ಯೂರೋಪಿನಲ್ಲಿ ಬಲು ಹೆಚ್ಚು. ಮಂಗೋಲತೆರ (ಮಮ್ಗೋಲಾಯ್ಡ್) ಜನರಲ್ಲಿ ತೀರಾ ಕಡಿಮೆ. ಒಂದೇ ಅಂಡಾಣು ಅವಳಿಗಳು 80 ಹೆರಿಗೆ ಪ್ರಸವಗಳಿಗೆ ಒಂದು ಅವಳಿ ಜನಿಸಿದರೆ, 80ಘಿ80=6400 ಒಂದು ತ್ರಿವಳಿಗಳು ಜನಿಸಬಹುದು, 80*80*80= 512000 ಹೆರಿಗೆಗೆ ಒಂದು ನಾಲ್ವಳಿ ಆಗಬಹುದು. (ಸ್ಥೂಲವಾಗಿ ಈ ಅನುಪಾತವನ್ನು ತಜ್ಞರು ಗುರುತಿಸಿದ್ದಾರೆ)
	
ಗರ್ಭದಲ್ಲಿ ಅವಳಿ ಮಕ್ಕಳ ಇರುವಿಕೆಯನ್ನು ಗುರುತಿಸುವುದು ಹೇಗೆ? ಸಾಧಾರಣ ಎರಡನೇ ತಿಂಗಳಲ್ಲಿ ಮಾಡುವ ಶ್ರವಣಾತೀತ ಧ್ವನಿ ತರಂಗ (ಅಲ್ಟ್ರಾಸೋನೋಗ್ರಫಿ) ಪರೀಕ್ಷೆಯಿಂದ ಗುರುತಿಸಬಹುದು. 4-5ನೇ ತಿಂಗಳಲ್ಲಿಯಾದರೆ ಗರ್ಭಕೋಶ ಹೆಚ್ಚು ಪ್ರಮಾಣದಲ್ಲಿ ಹಿಗ್ಗಿರುತ್ತದೆ. 7ನೇ ತಿಂಗಳ ವೇಳೆಗೆ ತಜ್ಞರ ಕೈಗಳಿಗೆ ಗರ್ಭಕೋಶದಲ್ಲಿರುವ ಶಿಶುಗಳ ಎರಡು ತಲೆಯನ್ನು ಗುರುತಿಸುವುದು ಸಾಧ್ಯ. (ಹಿಂದೆ ಎರಡು ಹೃದಯಗಳ ಬಡಿತವನ್ನು ಏಕಕಾಲದಲ್ಲಿ ಇಬ್ಬರು ತಜ್ಞರು ಆಲಿಸಿ ಅವಳಿಗಳ ಇರುವಿಕೆ ದೃಢೀಕರಿಸಬೇಕಾಗಿತ್ತು)       

ತೊಂದರೆಗಳು: ಮಾನವ ಸೃಷ್ಟಿಕ್ರಿಯೆ ಒಂದು ಮಗುವಿನ ಬೆಳವಣಗೆÂಗೆ, ಹೆರಿಗೆಗೆ ಅತ್ಯಂತ ಸೂಕ್ತವಾಗಿದೆ ಅವಳಿಗಳು ಹುಟ್ಟುವುದು ಅಪರೂಪವಲ್ಲ ಆದರೆ ತಾಯಿಗೂ ಮಕ್ಕಳಿಗೂ ಅಪಾಯ ಅಡ್ಡಿ ಆತಂಕಗಳು ಹೆಚ್ಚುತ್ತವೆ ರಕ್ತಹೀನತೆ, ಏರಿದ ರಕ್ತದೊತ್ತಡ, ಗರ್ಭಜಲ ಹೆಚ್ಚಾಗಿ ಹೊಟ್ಟೆ ಉಬ್ಬರಿಸುವುದು, ದಿನತುಂಬುವ ಮುನ್ನವೇ ಹೆರಿಗೆ ಮಧುಮೇಹ ಕಾಯಿಲೆ ಇವೆಲ್ಲ ಬರುವ ಸಾಧ್ಯತೆ ಇದೆ. ಮಕ್ಕಳು ತಲೆ ಮೊದಲಾಗಿ ಇಲ್ಲವೇ ಪೀಠಸ್ಥಾನ ಮೊದಲಾಗಿ ಹೆರಿಗೆಯಾಗದೆ ಇದ್ದರೆ ಶಸ್ತ್ರ ಚಿಕಿತ್ಸೆ ಅಗತ್ಯ ಇದೆ. ಮೊದಲು ಕಾಲುಮುಂದಾಗಿ ಹೆರಿಗೆಯಾದ ಶಿಶುವಿನ ತಲೆಗೆ ನಂತರ ಬರುವ ಶಿಶುವಿನ ತಲೆ ಕೊಂಡಿಯಂತೆ ಸಿಕ್ಕಿಕೊಂಡರೆ ಎರಡು ಮಕ್ಕಳ ಹಾಗೂ ತಾಯಿಯ ಜೀವಕ್ಕೂ ಅಪಾಯವಿದೆ. ಅತಿಯಾಗಿ ಗರ್ಭಕೋಶ ಹಿಗ್ಗಿರುವುದರಿಂದ ಹೆರಿಗೆಯಾದ ಮೇಲೆ ಅತಿರಕ್ತಸ್ರಾವ ಸಾಮಾನ್ಯ. ಕೆಲವೊಮ್ಮೆ ಗರ್ಭಕೋಶ ಕುಗ್ಗದೆ ತಾಯಿಯ ಜೀವಕ್ಕೆ ಅಪಾಯಕರ ಸ್ಥಿತಿ ಇದ್ದರೆ ಗರ್ಭಕೋಶವನ್ನೇ ತೆಗೆಯಬೇಕಾಗಬಹುದು. 
ಅವಳಿಗಳಾಗಲು ಕಾರಣವನ್ನು ಇಂದಿಗೂ ಸಿದ್ಧಪಡಿಸಿಲ್ಲ. ಕೆಲವು ತಲೆಮಾರುಗಳಲ್ಲಿ ಹೆಚ್ಚು ಕಾಣಬಹುದು ಬಂಜೆತನ ನಿವಾರಣಾ ವಿಧಾನಗಳಿಂದಲೂ ಅವಳಿಗಳಾಗಬಹುದು. ತಾಯಿಕಡೆಯ ಅನುವಂಶೀಯತೆಯೂ ಕಾರಣವಾಗಬಹುದು.
 	
ಚಾಮ್ಗ್-ವಿಮ್ಗ್ ಹೆಸರಿನಲ್ಲಿ ಬಾಳಿದ್ದ ಸಯಾಮಿ ಅವಳಿಗಳು 1811-1874 ಹೊಟ್ಟೆಯ ಮೇಲ್ಭಾಗದಲ್ಲಿ ಅಂಟಿಕೊಂಡಿದ್ದರು. ತೀರ ಇತ್ತೀಚೆಗೆ ಹೆಸರಾದ ಇರಾನೀ ಸೋದರಿಯರು ಹಿಂದಲೆಯಲ್ಲಿ ಅಂಟಿಕೊಂಡಿದ್ದರು.
	
ಇಬ್ಬರೂ ಬೇರೆಯಾಗುವ ತವಕದಿಂದ ಅಪಾಯಕಾರಿಯಾದ ಶಸ್ತ್ರಚಿಕಿತ್ಸೆಗೆ ಒಡ್ಡಿಕೊಂಡು ತಾವೆ ಆಹುತಿಯಾದರು. 
 	
ಗಮ್ಗಾ ಜಮುನಾ ಮುಂದಲೆ ಅಂಟಿಕೊಂಡಿದ್ದ ನೇಪಾಳಿ ಸೋದರಿಯರು. ಮೂರೂವರೆ ದಿನಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಇಬ್ಬರನ್ನು ಬೇರ್ಪಡಿಸಲಾಯಿತು.
 	
ತ್ರಿವಳಿ ನಾಲ್ವಳಿ ಮಕ್ಕಳಾಗುವುದರಲ್ಲಿನ ಅಪಾಯ ಗುರುತಿಸಿ ಇತ್ತೀಚೆಗೆ ಆರೋಗ್ಯವಾಗಿ ಒಂದೇ ಮಗು ಬೆಳೆಯಲಿ ಎಂದು ಉದ್ದೇಶಿಸಿದ ಭ್ರೂಣ ಇಳಿಕೆ ಚಿಕಿತ್ಸೆ. ಇಲ್ಲಿ ಬೇಡವಾದ ಶಿಶುವಿನ ಹೃದಯ ಬಡಿತವನ್ನು ಸ್ಕ್ಯಾನಿಂಗ್ ಪರೀಕ್ಷೆಯ ಮೂಲಕ ಗುರುತಿಸುತ್ತಾರೆ. ಹೃದಯಕ್ಕೆ ಪೊಟಾಶಿಯಂ ಕ್ಲೋರೈಡ್ ಅನ್ನು ಚುಚ್ಚುಮದ್ಡಿನ ಮೂಲಕ ಸ್ಕ್ಯಾನಿಂಗ್ ಮಾಡಿಕೊಂಡೇ ಕರಾರುವಾಕ್ಕಾಗಿ ಕೊಡಲಾಗುತ್ತದೆ. ಆ ಭ್ರೂಣ ಸಾಯುತ್ತದೆ ಉಳಿದ ಭ್ರೂಣ/ ಪಿಂಡಗೂಸು ಆರೋಗ್ಯವಾಗಿ ಬೆಳೆಯುತ್ತದೆ. 
ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪರಿಸರದ ಪಾತ್ರವನ್ನು ಕಂಡುಕೊಳ್ಳಲು ಅವಳಿಗಳನ್ನು ಬಹುವಾಗಿ ಬಳಕೆ ಮಾಡಲಾಗಿದೆ (ಅನೇಕಾನೇಕ ಭಾಷೆಯಲ್ಲಿ ಅನೇಕಾನೇಕ ಸಿನಿಮಾಗಳನ್ನು ಹುಟ್ಟುಹಾಕಿದೆ- ಈ ಅವಳಿಗಳ ಪ್ರಸಂಗಗಳು ಅನೇಕ ಅತಿರೇಕ-ಅಭಾಸಗಳನ್ನು ನಿರ್ಮಾಪಕರು ಪ್ರೇಕ್ಷಕರಿಗೆ ಉಣಿಸಿದ್ದಾರೆ! )
(ಪರಿಷ್ಕರಣೆ: ಡಾ|| ಇಂದಿರಾ ಎಸ್. ಪ್ರಸಾದ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ